ತೀರಾ ಇತ್ತೀಚೆಗೆ ಶಿಕ್ಷಣ ರಂಗದಲ್ಲಿ ಆದ ಕೆಲ ಬದಲಾವಣೆಗಳು ಇಲ್ಲಿವೆ. ದೂರಶಿಕ್ಷಣದಲ್ಲಿ ಇಗ್ನೊ ಹೊಸಹೊಸ ಕೋರ್ಸ್‌ಗಳನ್ನು ಆರಂಭಿಸಿದೆ. ಇದೇ ದಿಶೆಯಲ್ಲಿ ದೆಹಲಿ ವಿವಿ ಸಹ ಹೆಜ್ಜೆ ಹಾಕಿದೆ. ಮಾನ್ಯತೆ ಇಲ್ಲದಇಂಜನಿಯರಿಂಗ್ ಶಿಕ್ಷಣ ಸಂಸ್ಥೆಗಳು ಅಧಿಕವಾಗುತ್ತಿವೆ. ಇವನ್ನು ನಿಯಂತ್ರಿಸಲು ಎಐಸಿಟಿಇ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇಗ್ನೋದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್

ಪುಣೆಯಲ್ಲಿನ ಏರೋನಾಟಿಕಲ್ ಇಂಜನಿಯರಿಂಗ್ ಅಂಡ್ ರೀಸೆರ್ಚ್ ಆರ್ಗನೈಜೇಷನ್(ಏರೋ) ಸಹಕಾರದೊಂದಿಗೆ ಪಠ್ಯ ವಿಷಯವನ್ನು ರೂಪಿಸುವುದರ ಜೊತೆಗೆ ಅದೇ ಸಂಸ್ಥೆಯೊಂದಿಗೆ ಈ ಕೋರ್ಸ್‌ನ್ನು ನಿರ್ವಹಿಸಲು ಮುಂದಾಗಿದೆ. ನಾಲ್ಕು ವರ್ಷದ ಬಿ.ಟೆಕ್ ಏರೋನಾಟಿಕಲ್ ಇಂಜಿನಿಯರಿಂಗ್ ಮೂಲಕ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಅವಗಾಹನೆಯನ್ನು ಕಲ್ಪಿಸುವುದರೊಂದಿಗೆ, ವೃತ್ತಿ ನೈಪುಣ್ಯತೆಯನ್ನು ಕಲಿಸಲಿದೆ.
ದೂರ ಶಿಕ್ಷಣ ಪದ್ಧತಿಯೊಂದಿಗೆ ರೆಗ್ಯುಲರ್ ತರಗತಿಗಳನ್ನು ಸಹ ಕೋರ್ಸ್ ನಿರ್ವಹಿಸಲು ಬಳಕೆಮಾಡಿಕೊಳ್ಳಲಾಗುತ್ತದೆ. ಜುಲೈ 2009ರ ಶೈಕ್ಷಣಿಕ ವರ್ಷದಿಂದ ದೇಶವ್ಯಾಪಿಯಾಗಿ ಕೋರ್ಸ್ ಪ್ರಾರಂಭವಾಗುವ ಸಾಧ್ಯತೆಗಳಿವೆ. ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತಮ ತಾಂತ್ರಿಕ ನಿಪುಣರನ್ನು ತಯಾರಿಸುವ ಗುರಿಯೊಂದಿಗೆ ಇಗ್ನೊ ಈ ಕೋರ್ಸನ್ನು ಪ್ರಾರಂಭಿಸಲಿದೆ.
ನ್ಯಾಯಶಾಸ್ತ್ರ ಹಾಗೂ ಬೌದ್ಧಿಕ ಹಕ್ಕುಗಳ ಕೋರ್ಸ್
ಏರೋನಾಟಿಕಲ್ ಇಂಜನಿಯರಿಂಗ್ ನೊಂದಿಗೆ ನ್ಯಾಯಶಾಸ್ತ್ರ(Law) ಹಾಗೂ ಬೌದ್ಧಿಕ ಹಕ್ಕುಗಳ (Intellectual Property rights) ಕೋರ್ಸ್‌ಗಳನ್ನು ಪ್ರಾರಂಭಿಸಲು ಇಗ್ನೊ ನಿರ್ಧರಿಸಿದೆ. ಬೌದ್ಧಿಕ ಹಕ್ಕುಗಳ ಕೋರ್ಸ್‌ನ ರೂಪಕಲ್ಪನೆಗೆ ಆಸ್ಟ್ರೇಲಿಯಾದಲ್ಲಿನ ಕ್ವೀನ್ಸ್‌ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಹಕಾರವನ್ನು ಪಡೆದಿದೆ. ಈ ವಿಶ್ವವಿದ್ಯಾಲಯ ದೂರ ಶಿಕ್ಷಣದಲ್ಲಿ ಸಾಕಷ್ಟು ಹೆಸರು ಮಾಡಿದೆ. ಬೌದ್ಧಿಕ ಹಕ್ಕುಗಳ ಕ್ಷೇತ್ರಕ್ಕೆ ಆವಶ್ಯಕವಾದ ನ್ಯಾಯಶಾಸ್ತ್ರದ ನಿಪುಣರನ್ನು ತಯಾರಿಸಬೇಕು ಎಂಬುದು ಈ ಕೋರ್ಸ್‌ನ ಗುರಿ.
ನ್ಯಾಯಶಾಸ್ತ್ರದಲ್ಲಿ ಸಹ ಅನೇಕ ಕೋರ್ಸ್‌ಗಳನ್ನು ಇಗ್ನೊ ಈ ವರ್ಷ ಪ್ರಾರಂಭಿಸಲಿದೆ. ಸೈಬರ್ ಲಾಸ್(ಕಂಪ್ಯೂಟರ್ ಅಪರಾಧಕ್ಕೆ ಸಂಬಂಧಿಸಿದಂತೆ), ಪೇಟೆಂಟ್ ಲಾಸ್‌ನಲ್ಲಿ ಪೋಸ್ಟ್ ಗ್ರಾಡ್ಯುಯೇಟ್ ಸರ್ಟಿಫಿಕೇಟ್, ಅಗ್ರಿಕಲ್ಚರಲ್ ಲಾ, ಕ್ರಿಮಿನಲ್ ಜಸ್ಟೀಸ್‌ನಲ್ಲಿ ಪಿ.ಜಿ.ಡಿಪ್ಲೊಮಾ, ಬಿ.ಎ(ನ್ಯಾಯಶಾಸ್ತ್ರ), ಕ್ರಿಮಿನಲ್ ಜಸ್ಟೀಸ್ ಅಂಡ್ ಅಗ್ರಿಕಲ್ಚರಲ್ ಲಾ, ಸೈಬರ್ ಲಾ ಅಂಡ್ ಸೈಬರ್ ಸೆಕ್ಯುರಿಟಿ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಇಗ್ನೊ ಪ್ರಾರಂಭಿಸಲಿದೆ.
====================================================================
ಎಂ.ಟೆಕ್‌ನಲ್ಲಿ ನ್ಯೂಕ್ಲಿಯರ್ ಟೆಕ್ನಾಲಜಿ

ಎಂ.ಟೆಕ್ ನ್ಯೂಕ್ಲಿಯರ್ ಸೈನ್ಸ್ ಅಂಡ್ ಟೆಕ್ನಾಲಜಿ ಕೋರ್ಸ್‌ಗೆ ಪ್ರವೇಶ 'ಜಾಯಿಂಟ್ ಅಡ್ಮಿಷನ್ ಟೆಸ್ಟ್' ಮೂಲಕ ಲಭಿಸುತ್ತದೆ. ಐಐಟಿಗಳು ಈ ಪ್ರವೇಶ ಪರೀಕ್ಷೆಯನ್ನು ನಿರ್ವಹಿಸುತ್ತವೆ. ಪದವಿಯಲ್ಲಿ ಭೌತಶಾಸ್ತ್ರ ಒಂದು ವಿಷಯವಾಗಿ ಕನಿಷ್ಟ ಎರಡು ವರ್ಷ, ಗಣಿತಶಾಸ್ತ್ರ ಕನಿಷ್ಟ ಒಂದು ವರ್ಷ ಅಭ್ಯಸಿಸಿದ ಅಭ್ಯರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರು. ಡಿಗ್ರಿಯಲ್ಲಿ ಶೇ.60 ರಷ್ಟು ಅಂಕಗಳನ್ನು ತಪ್ಪದೆ ಪಡೆದಿರಬೇಕು.
ಈ ಕೋರ್ಸನ್ನು ಅತ್ಯುನ್ನತ ಪ್ರಮಾಣಗಳಡಿ ರೂಪಿಸಲಾಗರುವುದೊಂದು ವಿಶೇಷ. ಕೋರ್ಸ್‌ನ ಭಾಗವಾಗಿ ವಿದ್ಯಾರ್ಥಿಗಳು ಫ್ರಾನ್ಸ್, ಅಮೆರಿಕದಲ್ಲಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅಸೈನ್‌ಮೆಂಟ್‌ಗಳನ್ನು ಮಾಡಬೇಕಾಗುತ್ತದೆ. ಕೋರ್ಸ್‌ಗೆ ಪ್ರವೇಶ ಪಡೆದ ಪ್ರತಿ ವಿದ್ಯಾರ್ಥಿಗೆ ಮಾಸಿಕ 3,000 ರೂ.ಗಳ ವಿದ್ಯಾರ್ಥಿ ವೇತನ ಲಭಿಸುತ್ತದೆ. ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಬರುವ ಹಾಗೆ ಕೋರ್ಸ್‌ನ ರೂಪಕಲ್ಪನೆ ಮಾಡಲಾಗಿದೆ.
====================================================================
ಮೇನೇಜ್‌ಮೆಂಟ್ ಶಿಕ್ಷಣದಲ್ಲಿ ಒಂದು ವರ್ಷದ ಕೋರ್ಸಗಳು ತೀರಾ ಇತ್ತೀಚಿನ ಬೆಳವಣಿಗೆ. ಹೈದರಾಬಾದ್‌ನಲ್ಲಿನ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ ಈ ರೀತಿಯ ಕೋರ್ಸ್‌ಗಳಿಗೆ ರೂಪಕಲ್ಪನ ಮಾಡಿತು. ಇದೇ ಹಾದಿಯಲ್ಲಿ ಲಕ್ನೋದಲ್ಲಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮೇನೇಜ್‌ಮೆಂಟ್ ಒಂದು ವರ್ಷದ ಕೋರ್ಸನ್ನು ಪ್ರಾರಂಭಿಸಲು ನಿರ್ಣಯಿಸಿದೆ. ಐಐಎಂಗೆ ಸೇರಿದ ನೋಯಿಡಾ ಕ್ಯಾಂಪಸ್ಸಿನಲ್ಲಿ ಈ ಕೋರ್ಸ್‌ಗಳನ್ನು ನಿರ್ವಹಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅನುಭವ ಇರುವ ನಿಪುಣರಿಗಾಗಿ ಈ ಕೋರ್ಸನ್ನು ರೂಪಕಲ್ಪನೆ ಮಾಡಿದ್ದಾರೆ.
ಕೆನಡಾದಲ್ಲಿನ ಮೆಕ್‌ಗಿಲ್ ವಿಶ್ವವಿದ್ಯಾಲಯ ಈ ಕೋರ್ಸನ್ನು ನಿರ್ವಹಿಸಲು ಐಐಎಂಗೆ ಸಹಕರಿಸಲಿದೆ. ಕೋರ್ಸ್‌ನ ಭಾಗವಾಗಿ ಈ ಸಂಸ್ಥೆಯಲ್ಲಿ ನಾಲ್ಕೈದು ವಾರಗಳ ಕಾಲ ಶಿಕ್ಷಣ ಇರುತ್ತದೆ. ಇದರಲ್ಲಿ ಮೇನೇಜ್‌ಮೆಂಟ್ ವೃತ್ತಿಯಲ್ಲಿನ ಅಂತರಾಷ್ಟ್ರೀಯ ಧೋರಣೆಗಳು, ವ್ಯಾಣಿಜ್ಯ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ ವಿದ್ಯಾರ್ಥಿಗಳಿಗೆ ಅವಗಾಹನೆ ಮೂಡಿಸಲಾಗುತ್ತದೆ. ಇದಕ್ಕಾಗಿ ನಿಗದಿಪಡಿಸಲಾದ ಕೋರ್ಸ್‌ನ ಶುಲ್ಕ 10 ಲಕ್ಷ ರೂ.ಗಳು.
====================================================================
ಅನುಮತಿ ಇಲ್ಲದ ತಾಂತ್ರಿಕ ಕೋರ್ಸ್‌ಗಳು
ದೇಶದಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳಿಗಿರುವ ಬೇಡಿಕೆಯನ್ನು ಆಸರೆಯಾಗಿ ಮಾಡಿಕೊಂಡು ಕೆಲವೊಂದು ಸಂಸ್ಥೆಗಳು ಅನುಮತಿ ಇಲ್ಲದ ಕೋರ್ಸ್‌ಗಳನ್ನು ನಿರ್ವಹಿಸುತ್ತಿವೆ. ಕಾಲೇಜುಗಳಲ್ಲಿ ಸೇರಿದ ಬಳಿಕ ಈ ವಿಷಯ ಗೊತ್ತಾಗಿ ವಿದ್ಯಾರ್ಥಿಗಳು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ಕೋರ್ಸನ್ನು ಪೂರ್ಣಗೊಳಿಸುವ ವೇಳೆಗೆ ಆ ಕೋರ್ಸ್‌ಗೆ ಮಾನ್ಯತೆ ಇಲ್ಲದಿದ್ದರೆ, ವಿದ್ಯಾರ್ಥಿಯ ಸಮಯ, ಹಣ ಎಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ.
ಎಐಸಿಟಇ ಅನುಮತಿ ಇಲ್ಲದೆ ತಾಂತ್ರಿಕ ಕೋರ್ಸ್‌ಗಳನ್ನು ನಿರ್ವಹಿಸುವ ಶಿಕ್ಷಣಸಂಸ್ಥೆಗಳ ಸಂಖ್ಯೆ ಅಧಿಕವಾಗುತ್ತಿದೆ. ಪ್ರಸ್ತುತ ದೇಶದಲ್ಲಿ 209 ಶಿಕ್ಷಣ ಸಂಸ್ಥೆಗಳು ಎಐಸಿಟಇಯಿಂದ ಅನುಮತಿ ಇಲ್ಲದೆ ಟೆಕ್ನಿಕಲ್ ಕೋರ್ಸ್‌ಗಳನ್ನು ನಿರ್ವಹಿಸುತ್ತಿವೆ ಎಂದು ತೀರಾ ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿ ಆ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಸಿದೆ.
ಈ ರೀತಿಯ ಶಿಕ್ಷಣ ಸಂಸ್ಥೆಗಳು ಮಹಾರಾಷ್ಟ್ರದಲ್ಲಿ ಅಧಿಕವಾಗಿವೆ(82). ನಂತರದ ಸ್ಥಾನದಲ್ಲಿ ಕರ್ನಾಟಕ (20), ದೆಹಲಿ(19), ಪಶ್ಚಿಮ ಬಂಗಾಳ(16), ಉತ್ತರ ಪ್ರದೇಶ(15) ಇವೆ. ಅನುಮತಿ ಇರುವ ಶಿಕ್ಷಣಸಂಸ್ಥೆಗಳು, ಆ ಕೋರ್ಸ್‌ಗಳನ್ನು ನಿರ್ವಹಿಸಲು ಕೊಡುವ ಕಾಲಮಿತಿ ಮುಂತಾದ ವಿವರಗಳನ್ನು ಎಐಸಿಟಿಇ ಕಾಲಕಾಲಕ್ಕೆ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸುತ್ತಿರುತ್ತದೆ. ಅನುಮತಿ ಇಲ್ಲದ ಟೆಕ್ನಿಕಲ್ ಕೋರ್ಸ್‌ಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಎಐಸಿಟಿಇ ಸಿದ್ಧವಾಗಿದೆ.
====================================================================
ಎನ್‌ಸಿಇಆರ್‌ಟಿ ಹೊಸ ಪಠ್ಯಪುಸ್ತಕಗಳು; ಇವಕ್ಕೆ ಸರಿಸಾಟಿ ಯಾವುದು?
ಕಾಲಕಾಲಕ್ಕೆ ಪಠ್ಯವಿಷಯಗಳನ್ನು ಬದಲಾಯಿಸುವುದು, ಅದಕ್ಕನುಗುಣವಾಗಿ ಹೊಸ ಪಠ್ಯಪುಸ್ತಕಗಳನ್ನು ಹೊರತರಲು ರಾಜ್ಯ ಶಿಕ್ಷಣ ಇಲಾಖೆಗಳಿಗಿಂತ ಎನ್‌ಸಿಇಆರ್‌ಟಿ ಸಾಕಷ್ಟು ಮುಂದಿರುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಸಿಇಆರ್‌ಟಿ 5,8ನೇ ತರಗತಿಗಳಿಗೆ ಹೊಸ ಪಠ್ಯ ಪುಸ್ತಕಗಳನ್ನು ತರಲಿದೆ. ಪ್ರೊಫೆಸರ್ ಯಶ್‌ಪಾಲ್ ನೇತೃತ್ವದಲ್ಲಿನ ರಾಷ್ಟ್ರೀಯ ಪಠ್ಯಪುಸ್ತಕ ಪ್ರಣಾಳಿಕಾ ಸಮಿತಿ ಸೂಚಿಸಿದ ಮಾರ್ಗದರ್ಶಗಳನ್ನು ವಾಸ್ತವ ಜೀವನಕ್ಕೆ ಹತ್ತಿರವಾಗಿರುವಂತೆ ಪಾಠ್ಯಾಂಶಗಳನ್ನು ರೂಪಿಸುವುದು, ಅದಕ್ಕೆ ಅನುಗುಣವಾಗಿ ಬೋಧನೆಯಲ್ಲೂ ಬದಲಾವಣೆಗಳನ್ನು ತರುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಆಸಕ್ತಿ ಹುಟ್ಟಿಸುವುದು. ಇದರ ಮೂಲಕ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎನ್‌ಸಿಇಆರ್‌ಟಿ ಭಾವಿಸಿದೆ.
ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎನ್‌ಸಿಇಆರ್‌ಟಿ 2006, 2007ರಲ್ಲಿ ಎರಡು ಹಂತಗಳಲ್ಲಿ ಪಠ್ಯಪುಸ್ತಕಗಳನ್ನು ಬದಲಾಯಿಸಿತು. ಮೂರನೇ ಹಂತದಲ್ಲಿ 5,8ನೇ ತರಗತಿಯ ಪಠ್ಯಪುಸ್ತಕಗಳನ್ನು ಬದಲಾಯಿಸಲು ನಿರ್ಣಯಿಸಿದೆ. ಮಾರುಕಟ್ಟೆಗೆ ಬಿಡುಗಡೆಯಾದ ಕೂಡಲೇ ಅಂತರ್ಜಾಲದಲ್ಲೂ ಪಠ್ಯಪುಸ್ತಕಗಳು ಲಭ್ಯವಾಗಲಿವೆ. ವಿದ್ಯಾರ್ಥಿಗಳು ಈ ಪಠ್ಯಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಗಳನ್ನು ತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸಲಾಗಿದೆ.
No comments:
Post a Comment