Friday, December 5, 2008

ಹಾರ್ಡ್‌ವೇರ್ ಗೆ ಈಗ ಒಳ್ಳೆ ಕಾಲ

ಕಂಪ್ಯೂಟರ್ ಬಗ್ಗೆ ಗೊತ್ತಿರುವವರಿಗೆಲ್ಲಾ ಹಾರ್ಡ್‌ವೇರ್, ಸಾಫ್ಟ್‌ವೇರ್‌ಗಳ ಬಗ್ಗೆ ಅಷ್ಟೋ ಇಷ್ಟೋ ಗೊತ್ತೇ ಇರುತ್ತದೆ. ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ಮಾನಿಟರ್, ಮೌಸ್‌ನಂತಹ ಭೌತಿಕವಾಗಿ ಕಾಣಿಸುವ ವಸ್ತುಗಳನ್ನು ಹಾರ್ಡ್‌‍ವೇರ್ ಎನ್ನುತ್ತಾರೆ. ಕಂಪ್ಯೂಟರ್/ಹಾರ್ಡ್‌ವೇರ್ ಕೆಲಸ ನಿರ್ವಹಿಸಲು ಕೊಡುವ ಕೋಡ್‌ಗಳು, ನಿಬಂಧನೆಗಳನ್ನು ಸಾಫ್ಟ್‌ವೇರ್ ಎಂದು ಪರಿಗಣಿಸುತ್ತಾರೆ. ಹಾರ್ಡ್‌ವೇರ್ ಇಲ್ಲದೆ ಸಾಫ್ಟ್‌ವೇರನ್ನು ನಿರ್ವಹಿಸಲು ಸಾಧ್ಯವಿಲ್ಲ.


ಎಲ್ಲ ರೀತಿಯ ಕಂಪನಿಗಳೂ ಕಂಪ್ಯೂಟರೀಕರಣಗೊಳ್ಳುತ್ತಿವೆ. ಒಂದು ಕಂಪನಿಯಲ್ಲಿ ನೂರು, ಸಾವಿರ ಸಂಖ್ಯೆಯ ಕಂಪ್ಯೂಟರ್‌ಗಳು ಜೋಡಿಸಿದ್ದರೆ, ಒಂದು ಕಂಪ್ಯೂಟರ್‍ನಿಂದ ಮತ್ತೊಂದಕ್ಕೆ ಮಾಹಿತಿ ರವಾನೆಯಾಗಬೇಕಾದರೆ ಕಂಪ್ಯೂಟರ್‌ಗಳನ್ನು ಅನುಸಂಧಾನ ಮಾಡಬೇಕಾಗುತ್ತದೆ. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ನೆಟ್‌ವರ್ಕ್ ಎಂದು ಕರೆಯುತ್ತಾರೆ. ಹಾರ್ಡ್‌ವೇರ್, ನೆಟ್‌ವರ್ಕಿಂಗ್ ಕ್ಷೇತ್ರಗಳ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ನಿಪುಣರಿಗೆ ಅವಕಾಶಗಳು ಹೆಚ್ಚಾಗಿಯೇ ಇವೆ. ಈ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಬೇಕಾದರೆ, ಅಭ್ಯರ್ಥಿಗಳಿಗೆ ಸಹನೆ, ಭಿನ್ನವಾಗಿ ಆಲೋಚಿಸುವ ಸಾಮರ್ಥ್ಯ ಅತ್ಯಾವಶ್ಯಕ.

ನೂರೆಂಟು ಮಾರ್ಗಗಳು
ಹಾರ್ಡ್‌ವೇರ್, ನೆಟ್‌ವರ್ಕಿಂಗ್ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಹಲವಾರು ಮಾರ್ಗಗಳಿವೆ. ಅಭ್ಯರ್ಥಿಗಳ ಅರ್ಹತೆ, ಬದ್ಧತೆ, ಸಾಮರ್ಥ್ಯಗಳನ್ನು ಆಧರಿಸಿ ಉತ್ತಮ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿ ನಂತರ ಇಂಜಿನಿಯರಿಂಗ್ ಓದುವುದು ಒಂದು ಮಾರ್ಗ. ಕಂಪ್ಯೂಟರ್/ಎಲಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಷನ್ಸ್/ಇನ್‌ಸ್ಟ್ರುಮೆಂಟೇಷನ್/ಮಾನ್ಯುಫೆಕ್ಚರಿಂಗ್ ಸೈನ್ಸ್ ಮುಂತಾದ ವಿಭಾಗಗಳಲ್ಲಿ ಇಂಜಿನಿಯರಿಂಗ್ ಓದಿ, ನಂತರ ಖಾಸಗಿ ಸಂಸ್ಥೆಗಳಲ್ಲಿ ಅಲ್ಪಾವಧಿ ಕೋರ್ಸ್‌ಗಳನ್ನು ಮಾಡುವ ಮೂಲಕ ಹಾರ್ಡ್‌ವೇರ್, ನೆಟ್‌ವರ್ಕಿಂಗ್ ವೃತ್ತಿಗೆ ಪ್ರವೇಶ ಪಡೆಯಬಹುದು. ಇಂಜಿನಿಯರಿಂಗ್ ಓದುತ್ತಿರಬೇಕಾದರೆ ಈ ಕೋರ್ಸ್‌ಗಳನ್ನು ಮಾಡಬಹುದು.

  • ಕಂಪ್ಯೂಟರ್ ಅಥವಾ ಎಲಕ್ಟ್ರಾನಿಕ್ಸ್‌ನಲ್ಲಿ ಪಾಲಿಟೆಕ್ನಿಕ್ ನಂತರ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು.
  • ಪಿಯುಸಿ ನಂತರ ಬಿಸಿಎ, ಉದ್ಯೋಗ ಪಡೆಯಲು ಸಹಕಾರಿಯಾಗುವ ಹೆಚ್ಚುವರಿ ಕೋರ್ಸ್‌ಗಳನ್ನು ಮಾಡಬಹುದು.
  • ತಾತ್ವಿಕ ಅಧ್ಯಯನಕ್ಕಿಂತ ಪ್ರಾಯೋಗಿಕ ಅಧ್ಯಯನದಲ್ಲಿ ಹೆಚ್ಚು ಆಸಕ್ತಿಯುಳ್ಳ ಅಭ್ಯರ್ಥಿಗಳು ಆಧುನಿಕ ತಾಂತ್ರಿಕ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಪ್ರೆಂಟಿಷಿಪ್ ಒದಗಿಸುವ ವೃತ್ತಿ ಶಿಕ್ಷಣ (ಜಾಬ್ ಓರಿಯಂಟೆಡ್) ಕೋರ್ಸ್‌ಗಳನ್ನು ಮಾಡುವುದು ಉತ್ತಮ. ಆದರೆ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕಾದರೆ ವಿಶ್ವವಿದ್ಯಾಲಯ ಪದವಿ ಸಹ ಅವಶ್ಯಕವಾಗುತ್ತದೆ.

ಪ್ರಮಾಣ ಪತ್ರಗಳಿದ್ದರೆ ಒಳಿತು
ಹಾರ್ಡ್‌ವೇರ್, ಸಾಫ್ಟ್‌ವೇರ್ ವೃತ್ತಿಯಲ್ಲಿ ನೆಲೆಕಂಡುಕೊಳ್ಳುವ ಅಭ್ಯರ್ಥಿಗಳಿಗೆ ಅನೇಕ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯ. ಪ್ರಮುಖ ಸಂಸ್ಥೆಗಳು ನಿರ್ವಹಿಸುವ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಉದ್ಯೋಗಗಳ ನೇಮಕಾತಿಯಲ್ಲಿ ಪ್ರಾಧಾನ್ಯತೆ ಉಂಟು.
  • ಮೈಕ್ರೊಸಾಫ್ಟ್ ಸರ್ಟಿಫೈಡ್ ಸಿಸ್ಟಮ್ಸ್ ಇಂಜಿನಿಯರ್(ಎಂಸಿಎಸ್ ಇ): ಈ ಕೋರ್ಸ್‌ನ ಮೂಲಕ ವಿಂಡೋಸ್, ಮೈಕ್ರೊಸಾಫ್ಟ್ ವಿಂಡೋಸ್ ಸರ್ವರ್ ಸಿಸ್ಟಮ್ ಸಾಫ್ಟ್‌ವೇರ್‌ಗಳ ಆಧಾರ ಇನ್‌ಫ್ರಾಸ್ಟ್ರಕ್ಚರ್ ಸೊಲ್ಯೂಷನ್ಸ್ ತಯಾರಿಸಲು, ಅದನ್ನು ಜಾರಿಗೊಳಿಸುವಲ್ಲಿ ಶಿಕ್ಷಣ ಲಭಿಸುತ್ತದೆ. ಇದರಲ್ಲಿ ಮೆಸೇಜಿಂಗ್, ಭದ್ರತೆಯಂತಹ ವಿಶೇಷತೆಗಳು ಇವೆ. 4 ವಿಷಯಗಳಲ್ಲಿ ಪಾಸಾದರೆ ಎಂಸಿಎಸ್‌ಸಿ ಸರ್ಟಿಫಿಕೇಟ್ ನೀಡುತ್ತಾರೆ.
  • ಸಿಸ್ಕೊ ಸರ್ಟಿಫೈಯ್ಡ್ ನೆಟ್‌ವರ್ಕ್ ಅಸೋಸಿಯೇಟ್ (ಸಿಸಿಎನ್‌ಎ): ಇದರಲ್ಲಿ ನೆಟ್‌ವರ್ಕ್‌ಗೆ ಸಂಬಂಧಿಸಿದ ಶಿಕ್ಷಣ ನೀಡಲಾಗುತ್ತದೆ. ಲ್ಯಾನ್,ವ್ಯಾನ್,ಡಯಲ್ ಯಾಕ್ಸೆಸ್‌ನಂತಹ ಸೇವೆಗಳನ್ನು ನೀಡಲು ನಿಪುಣರ ಅವಶ್ಯಕತೆ ಇದೆ. ಐಪಿ, ಐಜಿಆರ್‌ಪಿ, ಸೀರಿಯಲ್,ಫ್ರೇಮ್ ರಿಲೆ, ಐಪಿ ಆರ್‌ಐಪಿ, ವಿಲ್ಯಾನ್, ಇಥರ್ನೆಟ್, ಯಾಕ್ಸೆಸ್ ಲಿಸ್ಟ್ಸ್ ಮುಂತಾದ ಪ್ರೋಟಾಕಾಲ್ಸ್ ಬಳಕೆಯಲ್ಲಿ ಈ ಸರ್ಟಿಫಿಕೇಟ್ ಕೋರ್ಸ್ ಉಪಯೋಗಕ್ಕೆ ಬರುತ್ತದೆ.

  • ರೆಡ್‌ಹ್ಯಾಟ್ ಸರ್ಟಿಫೈಡ್ ಇಂಜಿನಿಯರ್(ಆರ್‌ಎಚ್‌ಸಿಇ): ಈ ಶಿಕ್ಷಣದ ಮೂಲಕ ಆಪರೇಟಿಂಗ್ ಸಿಸ್ಟಂ,ಲಿನಕ್ಸ್ ಆಧಾರಿತ ನೆಟ್‍ವರ್ಕಿಂಗ್ ಅಂಶಗಳಲ್ಲಿ ಹಿಡಿತ ಸಾಧಿಸಬಹುದು.
ಅವಕಾಶಗಳು ಮತ್ತು ಭವಿಷ್ಯ
ಹಾರ್ಡ್‌ವೇರ್, ನೆಟ್ ವರ್ಕಿಂಗ್ ಶಿಕ್ಷಣದಲ್ಲಿ ಅರ್ಹತೆಯುಳ್ಳ ನಿಪುಣರಿಗೆ ದೇಶವ್ಯಾಪಿಯಾಗಿ ಉತ್ತಮ ಉದ್ಯೋಗವಕಾಶಗಳು ಲಭಿಸುತ್ತಿವೆ. ಹಾರ್ಡ್‌ವೇರ್ ಉತ್ಪನ್ನಗಳ ತಯಾರಿಕಾ ಕಂಪನಿಗಳು, ಸಿಸ್ಟಮ್ ಡಿಸೈನ್ ಕಂಪನಿಗಳು, ಸಾಫ್ಟ್‌ವೇರ್ ಕಂಪನಿಗಳು, ಕಾಲ್ ಸೆಂಟರ್‌ಗಳು, ಟೆಲಿಕಾಂ, ಹೊರಗುತ್ತಿಗೆ (ಬಿಪಿಒ) ಕಂಪನಿಗಳೊಂದಿಗೆ ಹಾರ್ಡ್‌ವೇರನ್ನು ದುರಸ್ಥಿಗೊಳಿಸುವ ಕಂಪನಿಗಳಲ್ಲೂ ಉದ್ಯೋಗವಕಾಶಗಳಿವೆ.

  • ನಮ್ಮ ದೇಶದಲ್ಲಿ ಏಸರ್ ಇಂಡಿಯಾ ಪ್ರೈ.ಲಿ, ಮೈಕ್ರೊ ಚಿಫ್ ಟೆಕ್ನಾಲಜೀಸ್, ಸಿಎಂಸಿ, ಕೋಮಾರ್ಕೊ ವೈರ್ ಲೆಸ್ ಟೆಕ್ನಾಲಜೀಸ್, ಎಸ್ಕೆ ಇಂಟರ್ನೆಷನಲ್, ಇಂಟೆಲ್ ಕಾರ್ಪೊರೇಷನ್, ಹ್ಯೂಲೆಟ್ ಪ್ಯಾಕರ್ಡ್ ಇಂಡಿಯಾ, ಡೆಲ್,ಸತ್ಯಂ ಕಂಪ್ಯೂಟರ್ಸ್, ವಿಪ್ರೊ,ಇನ್ಫೋಸಿಸ್, ಟಿಸಿಎಸ್ ನಂತಹ ಪ್ರಮುಖ ಕಂಪನಿಗಳು ಹಾರ್ಡ್‌ವೇರ್, ನೆಟ್ ವರ್ಕಿಂಗ್ ನಿಪುಣರಿಗೆ ಉದ್ಯೋಗ ನೀಡುತ್ತಿವೆ.
  • ಮತ್ತೊಂದು ಮುಖ್ಯವಾದ ವಿಚಾರವೆಂದರೆ....ಆರ್ಥಿಕ ಬಿಕ್ಕಟ್ಟು, ಅಂತಾರಾಷ್ಟ್ರೀಯ ವ್ಯಾಪಾರ, ಬಿಪಿಒ ಉದ್ಯಮದಲ್ಲಿನ ಕಷ್ಟನಷ್ಟಗಳು ಹಾರ್ಡ್‌ವೇರ್, ನೆಟ್ ವರ್ಕಿಂಗ್ ಕ್ಷೇತ್ರಗಳ ಮೇಲೆ ಎಳ್ಳಷ್ಟು ಪ್ರಭಾವ ಬೀರುವುದಿಲ್ಲ. ಐಟಿ ಕ್ಷೇತ್ರದಲ್ಲಿ ಸ್ಥಿರತೆಯಿಂದ ಕೂಡಿದ ಉದ್ಯೋಗಗಲು ಇವೆ ಎಂದು ಎದೆಯುಬ್ಬಿಸಿ ಹೇಳಬಹುದು.
  • ಅಭ್ಯರ್ಥಿಗಳು ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗ್ರತ್ತೆ ವಹಿಸಬೇಕಾಗುತ್ತದೆ. ಅಧ್ಯಾಪಕರ ಅರ್ಹತೆ, ಅನುಭವಗಳನ್ನು ಪರಿಶೀಲಿಸಬೇಕು. ಪ್ರಯೋಗಾಲಯದ ಸೌಲಭ್ಯಗಳನ್ನು ವಿಚಾರಿಸಿಕೊಳ್ಳಬೇಕು. ಹಿಂದೆ ಶಿಕ್ಷಣ ಪಡೆದ ವಿದ್ಯಾರ್ಥಿಗಳು, ನೇಮಕಾತಿಗಾಗಿ ಬರುತ್ತಿರುವ ಕಂಪನಿಗಳನ್ನು ಸಂಪರ್ಕಿಸಿದರೆ,ಶಿಕ್ಷಣ,ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ.