Saturday, April 19, 2008

Indian School of Business















''365 ದಿನಗಳು... 52 ವಾರಗಳು...12 ತಿಂಗಳು...
ಕಳೆದದ್ದೇ ಗೊತ್ತಾಗಲಿಲ್ಲ. ಇನ್ನು ನಿನ್ನೆ ಮೊನ್ನೆ ತಾನೆ ಕ್ಯಾಂಪಸ್‌ಗೆ ಅಡಿ ಇಟ್ಟಂತಿದೆ. ಆಗಲೇ ಐ.ಎಸ್.ಬಿಯ ಪದವಿ ಕೈಯಲ್ಲಿದೆ.'' ನಯನಾ ಕಣ್ಣುಗಳಲ್ಲಿ ಆನಂದ... ಕೈಯಲ್ಲಿ ತನ್ನ ಕನಸಿನ ಉದ್ಯೋಗದ ಆಫರ್. ''ಎಸ್... ನನ್ನ ಕನಸು ನಿಜವಾಯಿತು. ಸ್ವಂತ ಬಿಜಿನೆಸ್ ಪ್ರಾರಂಭಿಸುತ್ತಿದ್ದೇನೆ...'' ಸೌಮ್ಯಳ ಮಾತಿನಲ್ಲಷ್ಟೇ ಅಲ್ಲ ಕಣ್ಣಿನಲ್ಲೂ ಅದೇ ವಿಶ್ವಾಸ. ''ಶೀಘ್ರ ಸಿಂಗಪುರ್‌ಗೆ ಹೊರಡುತ್ತಿದ್ದೇನೆ...ಒಂದು ದೊಡ್ಡ ಕಂಪನಿಯಲ್ಲಿ ಎಚ್.ಆರ್.ಮೇನೇಜರ್ ಹುದ್ದೆ''...ನಟರಾಜ್ ಅಂದುಕೊಂಡಿದ್ದನ್ನು ಸಾಧಿಸಿದ.

ಇದಿಷ್ಟು ಹೈದರಾಬಾದ್ ಐ.ಎಸ್.ಬಿ(ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್) ಕ್ಯಾಂಪಸ್‌ನಲ್ಲಿ ಓದಿ ಕೈಗೆ ಪದವಿಗಳನ್ನು ಪಡೆದ ವಿದ್ಯಾರ್ಥಿಗಳ ಆಸೆ ಆಕಾಂಕ್ಷೆಗಳು, ಅವರ ಮಾತಿನಲ್ಲೇ. ಇದು ಈ ವರ್ಷದ ವಿದ್ಯಾರ್ಥಿಗಳಲ್ಲಿ ಧ್ವನಿಸಿದ ಮಾತುಗಳಷ್ಟೇ ಅಲ್ಲ. 2002ರಿಂದ ಐ.ಎಸ್.ಬಿಯಲ್ಲಿ ಓದಿಕೊಳ್ಳುತ್ತಿರುವ ಪ್ರತಿ ಬ್ಯಾಚ್ ವಿದ್ಯಾರ್ಥಿಗಳ ಅನುಭವ ಸಾರ ಇದು. ಅಲ್ಲಿನ ವಾತಾವರಣವೇ ಹಾಗೆ!


ಭಾರತದಲ್ಲಿ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಬರವಿಲ್ಲ. ಅವರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವಲ್ಲಿ ನಾವು ಹಿಂದುಳಿಯುತ್ತಿದ್ದೇವೆ-ರಾಹುಲ್ ಬಜಾಜ್,ಆದಿ ಗೋದ್ರೇಜ್, ಲಕ್ಷ್ಮಿ ಮಿಟ್ಟಲ್‌ನಂತಹ ಕೆಲವು ವ್ಯಾಪಾರಿ ದಿಗ್ಗಜರ ಶಿಕ್ಷಣತಜ್ಞರ ಮಾತಿನಲ್ಲಿ ವ್ಯಕ್ತವಾದ ಅಭಿಪ್ರಾಯ ಇದು. ಆಲಸ್ಯಂ ಅಮೃತಂ ವಿಷಂ ಎಂದು ಭಾವಿಸಿದ ಇವರು ಏಷ್ಯಾದಲ್ಲೇ ಪ್ರತಿಷ್ಠಾತ್ಮಕವಾದ ಬಿಜಿನೆಸ್ ಸ್ಕೂಲನ್ನು ನಮ್ಮ ದೇಶದಲ್ಲಿ ಪ್ರಾರಂಭಿಸಬೇಕು ಎಂದು ಧೃಡ ನಿಶ್ಚಯ ಮಾಡಿದರು. ವಿದೇಶಿ ಬಿ-ಸ್ಕೂಲ್‌ಗಳಲ್ಲಿನ ಕೆಲವು ಭಾರತೀಯ ಪ್ರೊಫೆಸರ್‌ಗಳ ಸಹಾಯದಿಂದ 1996ರಲ್ಲಿ ಒಂದು ಮಂಡಳಿಯನ್ನು ಏರ್ಪಡಿಸಿಕೊಂಡರು. ಸ್ಕೂಲನ್ನು ಸ್ಥಾಪಿಸಲು ಮುಂಬಯಿ, ಬೆಂಗಳೂರು, ಚೆನ್ನೈ ಸೂಕ್ತ ಸ್ಥಳಗಳೆಂದು ಮೊದಲು ಪರಿಶೀಲಿಸಿದರು. ನಮ್ಮ ರಾಜ್ಯದಲ್ಲೇ ಸ್ಕೂಲನ್ನು ಸ್ಥಾಪಿಸಿ ಎಂದು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದು ವಿಶೇಷ ರಿಯಾಯಿತಿ ಕೊಡುವುದಾಗಿಯೂ ಪ್ರಕಟಿಸಿತು. ಹಾಗಾಗಿ ಐ.ಎಸ್.ಬಿಗೆ ಹೈದರಾಬಾದಿನಲ್ಲಿ 1998ರಲ್ಲಿ ಬುನಾದಿ ಹಾಕಲಾಯಿತು. ಪ್ರಸ್ತುತ ಐ.ಎಸ್.ಬಿ ಅಧ್ಯಕ್ಷರಾಗಿ ರಜತ್‍ಗುಪ್ತ ಕಾರ್ಯನಿರ್ವಹಿಸುತ್ತಿದ್ದಾರೆ. ಅನಿಲ್ ಅಂಬಾನಿ, ನಾರಾಯಣ ಮೂರ್ತಿ ಯಂತಹ ಪ್ರಮುಖರು ಐ.ಎಸ್.ಬಿಗೆ ಆರ್ಥಿಕ ಸಹಾಯ ಸಹಕಾರಗಳನ್ನು ನೀಡುತ್ತಿದ್ದಾರೆ.

ಕೆಲ್ಲಾಗ್, ಹಾರ್ವರ್ಡ್ ಬಿ-ಸ್ಕೂಲ್‌ಗಳ ಗುಣಮಟ್ಟಕ್ಕೆ ತಕ್ಕಂತೆ ಅಲ್ಲಿಗಿಂತಲೂ ಮೂರು ಪಟ್ಟು ಅಧಿಕ ಖರ್ಚಿನಿಂದ ಕೂಡಿದ ಶಿಕ್ಷಣವನ್ನು ಐ.ಎಸ್.ಬಿಯಲ್ಲಿ ನೀಡಲಾಗುತ್ತಿದೆ. ಇದನ್ನು ವಿಶ್ವದ ಟಾಪ್ 20 ಬಿ-ಸ್ಕೂಲ್‌ಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಪ್ರಪಂಚದ ಭೂಪಟದಲ್ಲಿ ಹೈದರಾಬಾದಿನ ಈ ನಿರ್ವಹಣಾ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಬೇಕಾದರೆ, ಉತ್ತಮ ಅಧ್ಯಾಪಕರ ಬೃಂದವನ್ನು ಅಮೆರಿಕ, ಯೂರೋಪ್ ದೇಶಗಳಿಂದ ಕರೆತರಲಾಯಿತು. ಸಂಸ್ಥೆ ಹೊಸದು ಎನ್ನುವ ಕಾರಣಕ್ಕೆ ಅವರು ಇಲ್ಲಿ ಬಂದು ಪಾಠ ಮಾಡಲು ಆಸಕ್ತಿ ವಹಿಸುವುದಿಲ್ಲ. ಹಾಗೆ ಎಂದು ನಾವು ರಾಜಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಅವರನ್ನು ಅತಿಥಿ ಉಪನ್ಯಾಸಕರಾಗಿ ಆಹ್ವಾನಿಸಲಾಯಿತು. ಇಲ್ಲಿನ ವಾತಾವರಣ ಅವರಿಗೆ ಇಷ್ಟವಾಗಿ, ಹೆಚ್ಚಿನ ಸಮಯ ಇಲ್ಲೇ ಕಳೆಯಲು ಆಸಕ್ತಿ ತೋರಿಸಿದರು. ನಂತರ ಅವರಲ್ಲಿನ ಕೆಲವರನ್ನು ಪೂರ್ಣವಾಗಿ ತೊಡಗಿಸಿಕೊಳ್ಳಲು ಒಪ್ಪಂದ ಮಾಡಿಕೊಂಡೆವು. ಪ್ರಸ್ತುತ 23ಮಂದಿ ಪೂರ್ಣಾವಧಿ ಅಧ್ಯಾಪಕರಾಗಿ ನೇಮಿಸಿಕೊಳ್ಳಲಾಯಿತು. ಇವರೆಲ್ಲಾ ಒಂದು ಕಾಲದಲ್ಲಿ ವಿಶ್ವದ ಟಾಪ್ ಬಿ-ಸ್ಕೂಲ್‌ಗಳಲ್ಲಿ ಪಾಠ ಮಾಡಿದವರೆ. ನಾಲ್ಕು ವರ್ಷದ ಹಿಂದೆ ನಮ್ಮ ಶಾಲೆಯಲ್ಲಿನ ಇವರ ಸಂಖ್ಯೆ ಕೇವಲ ಐದು ಮಾತ್ರ. ಮುಂದಿನ ಎರಡು ವರ್ಷಗಳಲ್ಲಿ ಸೀಟುಗಳ ಸಂಖ್ಯೆಯನ್ನು 560 ಹೆಚ್ಚಿಸುತ್ತಿರುವುದಾಗಿ ಐ.ಎಸ್.ಬಿ ಮುಖ್ಯಸ್ಥ ಎಂ.ರಾಮಮೋಹನ್ ರಾವ್ ತಿಳಿಸಿದ್ದಾರೆ.


ಐ.ಎಸ್.ಬಿಯಲ್ಲಿ ಓದುತ್ತಿರುವ ಶೇ.20ರಷ್ಟು ಮಂದಿ ಅವರ ಕುಟುಂಬದೊಂದಿಗೆ ಅಲ್ಲೇ ಇದ್ದಾರೆ. ಇಂತಹವರಿಗಾಗಿಯೇ ವಿದ್ಯಾರ್ಥಿ ಗ್ರಾಮ(ಸ್ಟುಡೆಂಟ್ ವಿಲೇಜ್)ಗಳನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳೊಂದಿಗೆ ಅವರ ಕುಟುಂಬದವರೂ ಗ್ರಂಥಾಲಯ, ಜಿಮ್, ಈಜು ಕೊಳ...ಮುಂತಾದ ಸೌಲಹ್ಯಗಳನ್ನು ಉಪಯೋಗಿಸಿಕೊಳ್ಳಬಹುದು. ಶಿಕ್ಷಣಕ್ಕಾಗಿ ಕುಟುಂಬ ಸದಸ್ಯರಿಂದ ದೂರ ಸರಿಯಬೇಕಾದ ಪರಿಸ್ಥಿತಿ ಇಲ್ಲಿ ತಲೆದೋರುವುದಿಲ್ಲ. ಕುಟುಂಬದವರೊಂದಿಗೆ ಇದ್ದು ಇಲ್ಲಿ ಓದಿಕೊಳ್ಳುವುದರಿಂದ ವರ್ಷದ ಶಿಕ್ಷಣ ಸಮಯ ಕಳೆಯುವುದೇ ತಿಳಿಯುವುದಿಲ್ಲ ಎಂಬುದು ಇಲ್ಲಿನ ವಿದ್ಯಾರ್ಥಿಗಳ ಮನೋಭಿಪ್ರಾಯ.

ಪ್ರವೇಶ ಹೇಗೆ?
ಐ.ಎಸ್.ಬಿ. ಮುಖ್ಯವಾಗಿ 'ಪೋಸ್ಟ್ ಗ್ರಾಡ್ಯುಯೇಟ್ ಪ್ರೋಗ್ರಾಮ್ ಇನ್ ಮೇನೇಜ್‌ಮೆಂಟ್'ನಲ್ಲಿ ಶಿಕ್ಷಣ ನೀಡುತ್ತಿದೆ. ಇದು ಒಂದು ವರ್ಷದ ಕಾಲಾವಧಿಯ ಕೋರ್ಸ್. ಈ ಕೋರ್ಸ್‌ಗೆ ಪ್ರವೇಶಿಸಬೇಕೆಂದರೆ...

1. ಸ್ನಾತಕ ಪದವಿ ಪಡೆದು ಯಾವುದಾದರೂ ಕಂಪನಿಯಲ್ಲಿ ಎರಡು ವರ್ಷಗಳ ಉದ್ಯೋಗ ಅನುಭವ ಇರಬೇಕು.
2. ಜಿಮ್ಯಾಟ್(ಗ್ರಾಡ್ಯುಯೇಟ್ ಮೇನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್)ನಲ್ಲಿ ಉತ್ತಮ ಅಂಕಗಳನ್ನ್ನು ಪಡೆದಿರಬೇಕು. ಇಲ್ಲಿನ ವಿದ್ಯಾರ್ಥಿಗಳ ಸ್ಕೋರ್ 600ರಷ್ಟಿರುತ್ತದೆ.
3. ಪದವಿಯನ್ನು ಆಂಗ್ಲ ಮಾಧ್ಯಮದಲ್ಲಿ ಓದಿಲ್ಲದ ವಿದ್ಯಾರ್ಥಿಗಳು ಟೋಫೆಲ್(TOEFL)ಪರೀಕ್ಷೆ ಪಾಸಾಗಿರಬೇಕು.
4. ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 6 ಪ್ರಬಂಧ ರೂಪದ ಪ್ರಶ್ನೆಗಳಿಗೆ ಉತ್ತರಿಸಬೇಕು. ನೈತಿಕ ಮೌಲ್ಯಗಳು, ನಾಯಕತ್ವ ಲಕ್ಷಣಗಳು, ಐ.ಎಸ್.ಬಿ ನಂತರದ ಭವಿಷ್ಯ.... ಅಂಶಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
5. ಇದರೊಂದಿಗೆ ಸಂದರ್ಶನವೂ ಇರುತ್ತದೆ.
6. ಯಾವುದಕ್ಕೂ ಖಚಿತವಾದ ಕಟಾಫ್ ಅಂಕಗಳಿರುವುದಿಲ್ಲ. ಒಟ್ಟಾರೆಯಾಗಿ ಅಭ್ಯರ್ಥಿ ಐ.ಎಸ್.ಬಿಯಲ್ಲಿ ಓದಲು ಅರ್ಹನೆ ಎಂಬುದೇ ಮುಖ್ಯ.
7. ಒಟ್ಟು 8 ಸೆಮಿಸ್ಟರ್‌ಗಳು. ವಿದೇಶಿ ಬಿ-ಸ್ಕೂಲ್‌ಗಳಲ್ಲಿ ಓದುವ ಅವಕಾಶವನ್ನು ವರ್ಷದಲ್ಲಿ ಸುಮಾರು ನೂರು ವಿದ್ಯಾರ್ಥಿಗಳಿಗೆ 2ನೇ ಸೆಮಿಸ್ಟರ್‌ನಲ್ಲಿ ಕಲ್ಪಿಸಲಾಗುತ್ತುದೆ.
8. ಸಿಇಓಗಳು, ಮೇನೇಜರ್ ಸ್ಥಾಯಿಯವರಿಗೆ ಕೆಲವೊಂದು ಅಲ್ಪಾವಧಿಯ ಕೋರ್ಸ್‌ಗಳನ್ನು ನಿರ್ವಹಿಸುತ್ತಿದೆ ಐ.ಎಸ್.ಬಿ. ಮಾರ್ಕೆಟಿಂಗ್ ನಿಪುಣರಿಗೆ ರಿಸೆರ್ಚ್ ಫೆಲೋಷಿಫ್‌ಗಳನ್ನು ನೀಡುತ್ತಿದೆ.

ಐ.ಎಸ್.ಬಿ. ವಿಶೇಷಗಳು
ರೂ.15 ಲಕ್ಷಗಳು...ಐ.ಎಸ್.ಬಿ.ಟ್ಯೂಷನ್ ಶುಲ್ಕ. ವಿದ್ಯಾರ್ಥಿಗಳೆಲ್ಲಾ ಕಡ್ಡಾಯವಾಗಿ ಕ್ಯಾಂಪಸ್ಸಿನಲ್ಲೇ ಇರಬೇಕು. ವಸತಿ ಸೌಲಭ್ಯಕ್ಕಾಗಿ 1.26ಲಕ್ಷ ರೂ.ಗಳ ಶುಲ್ಕ ಭರಿಸಬೇಕಾಗುತ್ತದೆ. ಇಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೆಲವೊಂದು ಬ್ಯಾಂಕ್‌ಗಳು ಸಾಲಸೌಲಭ್ಯವನ್ನೂ ಒದಗಿಸುತ್ತವೆ.

  • ಐ.ಎಸ್.ಬಿ.ವಿದ್ಯಾರ್ಥಿಗಳಿಗೆ ವಿದೇಶಿ ಆಫರ್‌ಗಳು ಶೇ.ನೂರರಷ್ಟು ಹೆಚ್ಚಾಗಿವೆ. ಪ್ರಸ್ತುತ ಬ್ಯಾಚ್‌ಗೆ ಅಮೆರಿಕ, ಯೂರೋಪ್, ಏಷ್ಯಾ, ಫೆಸಿಫಿಕ್ ದೇಶಗಳಿಂದ ಅವಕಾಶಗಳು ಬರುತ್ತಿವೆ.
  • ಕಳೆದ ವರ್ಷ ಐ.ಎಸ್.ಬಿ.ವಿದ್ಯಾರ್ಥಿಗಳಿಗೆ ಬಂದ ಒಟ್ಟು ವಾರ್ಷಿಕ ವೇತನ ರೂ.15.27ಲಕ್ಷಗಳು. ಈ ವರ್ಷ 19 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ವಿದೇಶಿ ಅವಕಾಶಗಳ ವಿಷಯಕ್ಕೆ ಬಂದರೆ ಅಮೆರಿಕಾದಲ್ಲಿ ರೂ.55 ಲಕ್ಷಗಳು, ಯೂರೋಪಿನಲ್ಲಿ ರೂ.63 ಲಕ್ಷಗಳು.
  • 2008 ಬ್ಯಾಚ್‌ನಲ್ಲಿ ಶೇ.25ರಷ್ಟು ಮಹಿಳೆಯರು, ಶೇ.5ರಷ್ಟು ವಿದೇಶಿ ವಿದ್ಯಾರ್ಥಿಗಳಿದ್ದಾರೆ.
  • ಪ್ರಸ್ತುತ ವರ್ಷ 10 ಮಂದಿ ವೈದ್ಯರು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅವರೆಲ್ಲಾ ಹೆಲ್ತ್‌ಕೇರ್, ಫಾರ್ಮಾ ಈಕ್ವಿಟಿ, ಪ್ರೈವೇಟ್ ಈಕ್ವಿಟಿ, ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಮೇನೇಜರ್‌ಗಳಾಗಿ ಸೇರಲಿದ್ದಾರೆ.
  • ಇಲ್ಲಿನ ವಿದ್ಯಾರ್ಥಿಗಳು ಬೇರೆ ಸಂಸ್ಥೆಗಳಲ್ಲಿ ಸೇರುವುದಕ್ಕಿಂತ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಐ.ಎಸ್.ಬಿ ಪ್ರೋತ್ಸಾಹಿಸುತ್ತದೆ. ಒಂದು ವೇಳೆ ವ್ಯಾಪರನ್ನು ಮಧ್ಯದಲ್ಲಿ ನಿಲ್ಲಿಸಿದರೂ...ಕೋರ್ಸು ಮುಗಿಸಿದ ನಂತರದ ಎರಡು ವರ್ಷಗಳವರೆಗೂ ಕ್ಯಾಂಪಸ್ ಪ್ಲೇಸ್‍ಮೆಂಟ್‌ಗೆ ಹಾಜರಾಗಬಹುದು.
  • ಕಳೆದ ವರ್ಷದ ಅತ್ಯಧಿಕ ವೈಯಕ್ತಿಕ ವೇತನ ರೂ.44 ಲಕ್ಷಗಳು.
  • ಇನ್ನು ಮುಂದೆ ಒಟ್ಟು ವೇತನವನ್ನು ಬಿಟ್ಟು ವೈಯಕ್ತಿಕ ವೇತನಗಳನ್ನು ಪ್ರಕಟಿಸಬಾರದು ಎಂದು ಐ.ಎಸ್.ಬಿ ನಿರ್ಧರಿಸಿದೆ.

ಐ.ಎಸ್.ಬಿ. ವಿಳಾಸ:
Indian School of Business Gachibowli Hyderabad-500 032 India Ph +91 40 2300 7000 Fax +91 40 2300 7099

No comments: